ಕೆತ್ತು ಗುರುತುಗಳು

ಕೆಲವು ನೈಜಖನಿಜಗಳ ಹರಳುಗಳ ನಯವಾದ ಸಪಾಟಗಳ ಮೇಲೆ ಅಲ್ಲಲ್ಲೇ ಗುರುತಿಸಬಹುದಾದ ನಿರ್ದಿಷ್ಟ ಆಕೃತಿಯುಳ್ಳ ಸೂಕ್ಷ್ಮ ಕುಳಿಗಳು ಮತ್ತು ಉಬ್ಬುಗಳು (ಎಚ್ಡ್ ಫಿಗರ್ಸ್). ಇವುಗಳ ಉತ್ಪತ್ತಿಗೆ ಮುಖ್ಯ ಕಾರಣ ನೈಸರ್ಗಿಕ ದ್ರಾವಣಗಳು ಅಥವಾ ಆಮ್ಲಗಳು. ಇವು ಖನಿಜದ ನಿರ್ದಿಷ್ಟ ಭಾಗಗಳಲ್ಲಿ ಖನಿಜಾಂಶಗಳನ್ನು ಕೊಚ್ಚಿ ಕೊರೆದು ಈ ಕೆತ್ತು ಗುರುತುಗಳನ್ನು ಉಂಟುಮಾಡುತ್ತವೆ. ಖನಿಜಗಳ ಅಧ್ಯಯನದಲ್ಲಿ ಇವುಗಳಿಗೆ ಪ್ರಮುಖ ಪಾತ್ರ ಉಂಟು. ಇವನ್ನು ಮೊದಲಿಗೆ ಗುರುತಿಸಿದವ ಬಾಮ್ ಹಾಯರ್ ಎಂಬ ಖನಿಜ ವಿಜ್ಞಾನಿ. ಕೆತ್ತುಗುರುತುಗಳ ಸಹಾಯದಿಂದ ಖನಿಜದ ಹರಳುಗಳ ಅಣುರಚನೆಯನ್ನೂ ತನ್ಮೂಲಕ ಅವುಗಳ ಸಮಸೂತ್ರತೆಯನ್ನೂ ತಿಳಿಯಬಹುದು.

ಕೆತ್ತು ಗುರುತುಗಳು ಬಹುಮಟ್ಟಿಗೆ ದ್ರಾವಣಗಳ (ನೀರು, ಖನಿಜಾಮ್ಲಗಳು ಮತ್ತು ಕ್ಷಾರಗಳು) ಪ್ರಭಾವಕ್ಕೆ ಖನಿಜಗಳು ಒಳಗಾದಾಗ ಉಂಟಾಗುತ್ತವೆ. ಅದರಲ್ಲೂ ಹೈಡ್ರೊಫ್ಲೂರಿಕ್ ಆಮ್ಲ ಈ ದೃಷ್ಟಿಯಿಂದ ಬಹು ಪ್ರಭಾವಶಾಲಿ. ಹೆಚ್ಚು ಸ್ಥಿರ ಖನಿಜಗಳೆನಿಸಿದ ಸಿಲಿಕೇಟ್‍ಗಳು ಸಹ ಇದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಕೆಲವು ನೈಸರ್ಗಿಕ ಅನಿಲ ಅಥವಾ ಆವಿಗಳು ಸಹ ಖನಿಜಗಳ ಸಪಾಟಗಳ ಮೇಲೆ ಕೆತ್ತು ಗುರುತುಗಳನ್ನು ರೂಪಿಸಬಲ್ಲವು. ನೀರಿನ ಆವಿಯಂತೂ ಇದಕ್ಕೆ ಬಹು ಉತ್ತಮ ಉದಾಹರಣೆ ಎನಿಸಿದೆ. ಹೆಚ್ಚು ಒತ್ತಡ ಮತ್ತು ಉಷ್ಣತೆಯ ಸನ್ನಿವೇಶದಲ್ಲಿ ಇದು ಬಹು ಪ್ರಭಾವಶಾಲಿ. ಈ ಕಾರಕಗಳ ಪ್ರಭಾವಕ್ಕೆ ಖನಿಜಗಳು ಹೆಚ್ಚು ಕಾಲ ಒಳಗಾಗಿದ್ದಲ್ಲಿ ರೂಪ ತಳೆಯುವ ಕೆತ್ತು ಗುರುತುಗಳ ಆಕಾರವೂ ಅಷ್ಟೇ ದೊಡ್ಡದಾಗಿರುತ್ತದೆ. ಅಲ್ಲದೆ ಒಂದೇ ಕಾರಕ ಹರಳಿನ ವಿವಿಧ ದಿಕ್ಕುಗಳಲ್ಲಿ ವಿವಿಧ ರೀತಿಯ ಕೆತ್ತುಗುರುತುಗಳನ್ನು ಸೃಜಿಸಬಲ್ಲದು. ಸಾಮಾನ್ಯವಾಗಿ ಗುರುತುಗಳು ತಮ್ಮ ಬೆಳೆವಣಿಗೆಯಲ್ಲಿ ಹರಳಿನ ಅಕ್ಷರೇಖೆಗಳನ್ನು ಅನುಸರಿಸುತ್ತವೆ. ಕೆತ್ತು ಗುರುತುಗಳ ಅಂಚುಗಳು ಹರಳಿನ ನಿರ್ದಿಷ್ಟ ದಿಕ್ಕುಗಳಿಗೆ ಸಮಾಂತರವಾಗಿರುತ್ತವೆ (ಚಿತ್ರ 1).

 ಅಲ್ಲದೆ ಇವು ಹರಳಿನ ನಿರ್ದಿಷ್ಟ ಜಾಡುಗಳಿಗೂ ಸೀಮಿತವಾಗಿರುತ್ತವೆ. ಸಾಮಾನ್ಯವಾಗಿ ಗುರುತುಗಳು ಮೂಲ ಹರಳಿನ ಸಮಸೂತ್ರತಾ ಸ್ವರೂಪವನ್ನು ಪ್ರತಿಬಿಂಬಿಸುತ್ತವೆ. ನಿಸರ್ಗದಲ್ಲಿ ದೊರೆಯುವ ವಜ್ರ, ಕ್ವಾಟ್ರ್ಸ್, ಗಾರ್ನೆಟ್, ಕ್ಯಾಲ್ಸೈಟ್, ಡಾಲೊಮೈಟ್, ಅಪಟೈಟ್, ಕೊರಂಡಂ, ಫ್ಲೂರೈಟ್, ಟೋಪಾಸ್ó, ಮಸ್ಕೊವೈಟ್ ಇತ್ಯಾದಿ ಖನಿಜಗಳ ಹರಳುಗಳ ಸಪಾಟಗಳ ಮೇಲೆ ಕೆತ್ತು ಗುರುತುಗಳನ್ನು ಸರ್ವಸಾಮಾನ್ಯವಾಗಿ ಗುರುತಿಸಬಹುದು; ಪಟಿಕದ ಹರಳನ್ನು ಒದ್ದೆಬಟ್ಟೆಯಲ್ಲಿ ಸುತ್ತಿ ಕೆಲವು ಗಂಟೆಗಳ ಕಾಲ ಹಾಗೆಯೇ ಇಟ್ಟು ಅನಂತರ ಪರೀಕ್ಷಿಸಿದಲ್ಲಿ ನಯವಾದ ಹರಳಿನ ಮುಖಗಳ ಮೇಲೆಲ್ಲ ಸಣ್ಣ ಸಣ್ಣ ಆದರೆ ನಿರ್ದಿಷ್ಟ ಆಕೃತಿಯ ಕುಳಿಗಳು ಉದ್ಭವವಾಗಿರುವುದನ್ನು ಕಾಣಬಹುದು.

ಕ್ಯಾಲ್ಸೈಟ್ ಮತ್ತು ಡಾಲೋಮೈಟ್ ಖನಿಜಗಳ ಹರಳುಗಳು ಹೊರ ಆಕಾರದಲ್ಲಿ ಯಾವ ಬಗೆಯ ವ್ಯತ್ಯಾಸಗಳನ್ನೂ ತೋರ್ಪಡಿಸುವುದಿಲ್ಲ. ಹೀಗಾಗಿ ಒಂದನ್ನು ಮತ್ತೊಂದರಿಂದ ಗುರುತಿಸುವುದು ಕಷ್ಟ. ಆದರೆ ಇವುಗಳ ಸಪಾಟಗಳ ಮೇಲೆ ಕಾಣುವ ಕೆತ್ತು ಗುರುತುಗಳ ಸಹಾಯದಿಂದ ಈ ಎರಡು ಖನಿಜಗಳನ್ನೂ ಕಷ್ಟವಿಲ್ಲದೆ ಗುರುತಿಸಿ ಬೇರ್ಪಡಿಸಬಹುದು. ಆಕಾರದಲ್ಲಿ ಒಂದರ ಕೆತ್ತು ಗುರುತು ಮತ್ತೊಂದನ್ನು ಹೋಲುವುದೇ ಇಲ್ಲ.

ಮಸ್ಕೊವೈಟ್ ಎಂಬ ಅಭ್ರಕದ ಗುಂಪಿನ ಖನಿಜ ಮಾನೊಕ್ಲಿನಿಕ್ ವರ್ಗಕ್ಕೆ ಸೇರಿದ್ದರೂ ನೋಡಲು ಷಷ್ಠಭುಜ (ಹೆಕ್ಸಾಗೊನಲ್) ವರ್ಗದ ಖನಿಜಗಳ ಆಕೃತಿಯನ್ನೇ ಹೋಲುತ್ತದೆ. ಆದರೆ ಈ ಎರಡು ವರ್ಗದ ಹರಳುಗಳಿಗೂ ಅಕ್ಷೀಯ ಮತ್ತು ಸಮಸೂತ್ರತಾ ಸ್ವಭಾವಗಳಲ್ಲಿ ನಿರ್ದಿಷ್ಟ ವ್ಯತ್ಯಾಸಗಳಿವೆ. ಈ ಸಂದರ್ಭದಲ್ಲಿ ಕೆತ್ತುಗುರುತುಗಳನ್ನೇ ನೆಚ್ಚಬೇಕಾಗುತ್ತದೆ (ಚಿತ್ರ 2). ಇವು ವಿಶಿಷ್ಟವಾದ ಮಾನೊಕ್ಲಿನಿಕ್ ಲಕ್ಷಣವನ್ನು ಹೊರಸೂಸಿ ಮಾಸ್ಕೊವೈಟ್‍ನ ನಿಜ ಸ್ವಭಾವವನ್ನು ಎತ್ತಿ ತೋರಿಸುತ್ತವೆ.
ಕ್ವಾಟ್ರ್ಸ್ ಖನಿಜದ ಟ್ರ್ಯಾಪಸೊóಹೀಡ್ರಲ್ ವರ್ಗದ ಹರಳುಗಳನ್ನು ಅವುಗಳ ದೃಗ್ವಿಜ್ಞಾನಗುಣಗಳಿಗನುಸಾರವಾಗಿ ಬಲಗೈ ಮತ್ತು ಎಡಗೈ ಉಪವರ್ಗಗಳಾಗಿ ವಿಂಗಡಿಸಲಾಗಿದೆ. ಕೆಲವು ಸೂಕ್ಷ್ಮ ವೈಜ್ಞಾನಿಕ ಉಪಕರಣಗಳ ತಯಾರಿಕೆಯಲ್ಲಿ ಇವುಗಳ ಆಯ್ಕೆ ಬಹುಮುಖ್ಯ. ಸಾಮಾನ್ಯ ರೀತಿಯಲ್ಲಿ ಒಂದನ್ನು ಮತ್ತೊಂದರಿಂದ ಬೇರ್ಪಡಿಸುವುದಂತೂ ಅಸಾಧ್ಯದ ಮಾತು. ಕಾರಣ ಈ ಎರಡರ ಹೋಲಿಕೆ ಅಷ್ಟು ಹೆಚ್ಚಿನದು. ಆದರೆ ಈ ಹರಳುಗಳ ಹೊರಮೈ ಮೇಲೆ ಉಂಟಾಗುವ ಕೆತ್ತುಗುರುತುಗಳ ಸಹಾಯದಿಂದ ಇವೆರಡನ್ನೂ ಸುಲಭವಾಗಿ ಗುರುತಿಸಿ ಬೇರ್ಪಡಿಸಬಹುದು (ಚಿತ್ರ 3). 

ಕಾರಕವಸ್ತುವಿನ ಕೊಚ್ಚಿಹಾಗುವ ಕಾರ್ಯ ತೀವ್ರಗತಿಯಲ್ಲಿ ತಕ್ಕಷ್ಟು ಕಾಲ ಮುಂದುವರಿದಲ್ಲಿ ಖನಿಜದ ಹರಳಿನ ನೈಜಸ್ವರೂಪವೇ ಗುರುತಿಸಲಾರದಷ್ಟು ಮಟ್ಟಿಗೆ ಬದಲಾಗುವ ನಿದರ್ಶನಗಳೂ ಉಂಟು. ಸಂಶೋಧನಾಲಯದಲ್ಲೂ ಕೆಲವು ರಾಸಾಯನಿಕ ಕಾರಕಗಳನ್ನು ಉಪಯೋಗಿಸಿ ವಿವಿಧ ಖನಿಜಗಳ ಹರಳುಗಳ ಮೇಲೆ ಕೆತ್ತು ಗುರುತುಗಳನ್ನು ಕೃತಕವಾಗಿ ಸೃಜಿಸಬಹುದು. ಹೀಗಾದ ಗುರುತುಗಳು ಖನಿಜ ವಿಜ್ಞಾನಿಗೆ ಅವನ ಸಂಶೋಧನೆಯಲ್ಲಿ ಹೆಚ್ಚಿನ ನೆರವನ್ನು ನೀಡುತ್ತವೆ.    					
	 (ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ